ಚುನಾವಣೆ ಹತ್ತರ ಬರುತ್ತಿದೆ. ಇದುವರೆಗೆ ದಿನನಿತ್ಯವೂ ಪತ್ರಿಕೆಗಳಲ್ಲಿ,
ಮಾಧ್ಯಮಗಳಲ್ಲಿ ಅಭ್ಯರ್ಥಿ ಸ್ಥಾನದ ಆಕಾಂಕ್ಷಿಗಳು
ನಡೆಸುತ್ತಿರುವ ನಾನಾ ರೀತಿಯ ಕಸರತ್ತುಗಳನ್ನು ಗಮನಿಸಿದರೆ ಏನಾಗಬಹುದೆಂದು ಸೂಕ್ಷ್ಮವಾಗಿ ರಾಜಕೀಯ
ವಿದ್ಯಮಾನಗಳನ್ನು ಗಮನಿಸುವ ಪ್ರತಿಯೊಬ್ಬರೂ ಊಹಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನದ ಕೊನೆಯ ಕ್ಷಣದವರೆಗೂ ಈ ಕಸರತ್ತು,
ಲಾಭಿ, ಭಿನ್ನಮತ ಎಲ್ಲವೂ ನಡೆಯುತ್ತದೆ. ಈ ಎಲ್ಲದರ ನಡುವೆ ಅಭ್ಯರ್ಥಿಗಳು ಚುನಾವಣೆಯ ಕಣಕ್ಕಿಳಿಯುತ್ತಾರೆ.
ಪ್ರತಿಯೊಬ್ಬರ ಉದ್ದೇಶವೂ ಚನಾವಣೆಯಲ್ಲಿ ಜಯಗಳಿಸುವುದೇ
ಆಗಿರುತ್ತದೆ. ಇದಕ್ಕಾಗಿ ಅವರು ಹಗಲು-ರಾತ್ರಿ ಪ್ರಚಾರ ಕಾರ್ಯದಲ್ಲಿ ತೊಡಗಿರುತ್ತಾರೆ. ಇವರ ಜೊತೆಗೆ
ಹೆಂಡತಿ ಮಕ್ಕಳು, ಕುಟುಂಬದವರು,ಸ್ನೇಹಿತರು, ಸಿನಿಮಾ ತಾರೆಯರು ಪ್ರಚಾರ ಕಾರ್ಯದಲ್ಲಿ ತೊಡಗಿರುತ್ತಾರೆ.
ನಾನಾ ಕನಸ್ಸು, ಆದರ್ಶಗಳನ್ನಿಟ್ಟುಕೊಂಡು ಈ ದೇಶದ ಅಥವಾ ರಾಜ್ಯದ ಭವಿಷ್ಯವನ್ನು ಬದಲಾಯಿಸಬೇಕೆಂಬ ದೃಢ
ನಿರ್ಧಾರದಿಂದ ಚುನಾವಣೆಯ ಕಣಕ್ಕಿಳಿಯುತ್ತಾರೆ. ಪ್ರಾರಂಭದಲ್ಲಿ ಎಲ್ಲವೂ ಸಂದರ. ನಂತರ ತಿಳಿಯುವುದು
ಇದು ಹೂವಿನ ಕುರ್ಚಿಯಲ್ಲ, ಮುಳ್ಳುಗಳಿಂದ ಕೂಡಿರುವ ಕುರ್ಚಿ ಎಂದು. ಮುಳ್ಳುಗಳಿಂದ ಕಸರತ್ತುಗಳನ್ನು ನಡೆಸುತ್ತಾರೆ. ಪಕ್ಷಾಂತರಾಗುತ್ತಾರೆ. ರಾಜೀನಾಮೆ
ನೀಡುವ ನಾಟಕವಾಡುತ್ತಾರೆ. ಇತ್ಯಾದಿ ಇತ್ಯಾದಿ ಪ್ರಚಾರ ಕಾರ್ಯದಲ್ಲಿ ಮಾತ್ರ ಅಭ್ಯರ್ಥಿ ಮನೆ ಮನೆಗೂ
ತೆರಳಿ ಅಕ್ಕ, ಅಣ್ಣ, ಅಪ್ಪ, ಅಮ್ಮ ನಿಮ್ಮ ಮತ ನಮಗೆ ಹಾಕಬೇಕೆಂದು ಬೇಡುತ್ತಾರೆ. ಇನ್ನು ಕೆಲವರು ಯಾರಿಗೆ
ಓಟು ನೋಟಿಗೆ ಓಟು ಎನ್ನುವವರು ನಮ್ಮ ಮಧ್ಯೆ ಇದ್ದಾರೆ. ಇದಕ್ಕಾಗಿ ಯಾರಿಗೂ ತಿಳಿಯದ ರೀತಿಯಲ್ಲಿ ಮತದಾರಾರಿಗೆ
ಸೀರೆ, ಮೂಗುಬಟ್ಟು, ಸಾರಾಯಿ, ಬಾಡೂಟ ಮುಂತಾದವುಗಳ ಹಂಚಿಕೆ ಭರದಿಂದ ಸಾಗುತ್ತದೆ. ಇವೆಲ್ಲವೂ ಅಭ್ಯರ್ಥಿ
ಗೆಲುವಿಗಾಗಿ ನಡೆಸುವ ಕಸರತ್ತಾಗಿವೆ. ಇನ್ನು ಹಲವು ರೀತಿಯ ಕಸರತ್ತುಗಳು ನಡೆಯುತ್ತವೆ. ಜಾತಿಯ ಆಧಾರದ
ಮೇಲೆ ಹಲವಾರು ಭರವಸೆಗಳನ್ನಿಟ್ಟುಕೊಂಡು ಚುನಾವಣೆಯ ಕಣಕ್ಕಿಳಿಯುವವರು ನಮ್ಮ ಮಧ್ಯದಲ್ಲಿ ಇದ್ದಾರೆ.
ಇದರಿಂದ ರಾಜಕೀಯ ಒಳಜಗಳಗಳು ಸಮಾಜದ ಮೇಲೆ ದುಷ್ಪರಿಣಾಮಗಳನ್ನು ಉಂಟುಮಾಡುತ್ತಲೇ ಇವೆ. ವಿಧಾನಸೌಧದಲ್ಲಿ
ನಿಮಗೆ ಏನಾದರೂ ಕೆಲಸಗಳಾಗಬೇಕಾದರೆ ಲಿಂಗಾಯತರಾಗಿದ್ದರೆ ಒಂದನ್ನು ಒತ್ತಿ, ವಕ್ಕಲಿಗರಾಗಿದ್ದರೆ ಎರಡನ್ನು
ಒತ್ತಿ, ಕುರುಬರಾದರೆ ಮೂರನ್ನು ಒತ್ತಿ, ಬೇರೆ ಜಾತಿಗೆ ಸೇರಿದವರಾಗಿದ್ದರೆ ನ್ನು ಒತ್ತಿ ಎನ್ನುವ
ಮಾತುಗಳು ಜಾತಿಯ ಆಧಾರದ ಮೇಲೆ ಕೆಲಸಗಳು ನಡೆಯುತ್ತಿರುವುದನ್ನು ಕಾಣಬಹುದು. ಜಾತಿಯ ತಾರತಮ್ಯಗಳು ರಾಜಕೀಯದಿಂದ ಇನ್ನಷ್ಟು ಬಲಿಷ್ಟವಾಗುತ್ತಿರುವುದನ್ನು ನಾವು
ಗಮನಿಸಬಹುದು. ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ನಾವು ಕೇವಲ ಕೆಲವೇ ಪಕ್ಷಗಳನ್ನು ಕಾಣಲು ಸಾಧ್ಯವಾಗಿತ್ತು.
ಆದರೆ ಇಂದು ನಮ್ಮ ಮುಂದೆ ಅನೇಕ ಪಕ್ಷಗಳಿವೆ. ಯಾವ ಪಕ್ಷವನ್ನು ಮತದಾರರು ನಂಬಬೇಕು ಎನ್ನುವುದೇ ಇಂದು ದೊಡ್ಡ ಸಮಸ್ಯೆಯಾಗಿದೆ. ಆದರೂ ಅವರು ಮತದಾನ ಮಾಡದೆ
ಸುಮ್ಮನಿರಲಾರರು. ಮತದಾನ ಮಾಡಲೇ ಬೇಕು. ಇದರಿಂದ ಮತದಾರರು ಒಂದು ಪಕ್ಷವನ್ನು ಬೆಂಬಲಿಸಿ ಗದ್ದುಗೆಗೆ
ತರುತ್ತಾರೆ. ಗದ್ದುಗೆಗೆ ಬಮದವರು ತಮ್ಮ ಗದ್ದುಗೆಯ ಬಗ್ಗೆಯೇ ಹೆಚ್ಚು ತಲೆಕೆಡಿಸಿಕೊಳ್ಳುತ್ತಾರೆಯೇ
ಹೊರತು ರಾಜ್ಯದ, ದೇಶದ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ. ಇದರಿಂದ ಸಮಸ್ಯೆಗಳು ನಿವಾರಣೆಯಿರಲಿ, ಇನ್ನಷ್ಟು
ಸಮಸ್ಯೆಗಳನ್ನು ಉದ್ಭವಿಸುತ್ತಾರೆ. ಭಾರತಕ್ಕೆ ಸ್ವಾತಂತ್ರ್ಯ
ಬಂದು ಅರವತ್ತೈದು ವರ್ಷಗಳಾಗಿದ್ದರೂ ಕರ್ನಾಟಕದಲ್ಲಿ ನಾವಿನ್ನು ಒಬ್ಬ ಮಹಿಳಾ ಮುಖ್ಯಮಂತ್ರಿಯನ್ನು
ನೋಡಲಿಕ್ಕೆ ಸಾಧ್ಯವಾಗಿಲ್ಲ. ಇದು ಪುರುಷರು ಮಹಿಳೆಯರನ್ನು ರಾಜಕೀಯ ವಲಯದಿಂದ ಹೇಗೆ ಹೊರಗಿಟ್ಟಿದ್ದಾರೆ
ಎಂಬುದಕ್ಕೆ ಸಾಕ್ಷಿಯಾಗಿದೆ. ಅನಿಷ್ಟಕ್ಕೆಲ್ಲ ಶನೇಶ್ವರನೇ ಕಾರಣ ಎಂಬತೆ ನಾವು ರಾಜಕೀಯ ಅಭ್ಯರ್ಥಿಗಳನ್ನೆ
ದೂಷಿಸುವುದಕ್ಕೂ ಸಾಧ್ಯವಿಲ್ಲ. ಇಲ್ಲಿ ಮತದಾರರೂ ಕಾರಣರಾಗುತ್ತಾರೆ. ಯಾವುದೊ ಆಸೆ ಆಮಿಷಗಳಿಗೆ ಬಲಿಯಾಗಿ
ದುಷ್ಟವಾದ, ಭ್ರಷ್ಟವಾದ ವ್ಯಕ್ತಿಯರನ್ನು ಆಯ್ಕೆ ಮಾಡಿ ಕಳಿಸಿರುತ್ತಾರೆ. ಇದರಿಂದ ಅವರು ತಾವು ಖರ್ಚು
ಮಾಡಿದ ಹತ್ತರಷ್ಟು ಹಣವನ್ನು ದೋಚುವುದರಲ್ಲಿಯೇ ಮಗ್ನರಾಗುತ್ತಾರೆ. ಆದ್ದರಿಂದ ಮತದಾರರು ಯಾವುದೇ ಆಸೆ-ಆಮಿಷಗಳಿಗೆ
ಬಲಿಯಾಗದೆ ಹತ್ತು ಹಲವು ದೃಷ್ಟಿಗಳಿಂದ ಚಿಂತಿಸಿ ಯೋಚಿಸಿ ಮತ ನೀಡಿ ಒಬ್ಬ ವ್ಯಕ್ತಿಯನ್ನು ಆಯ್ಕೆ ಮಾಡಿದಾಗ
ಸ್ವಲ್ಪ ಮಟ್ಟಿಗಾದರೂ ನಾಡಿನ ಮತ್ತು ಜನರ ಹಿತಕ್ಕಾಗಿ ಕೆಲಸಮಾಡುತ್ತಾರೆ ಎಂಬ ಭರವಸೆಯನ್ನಿಟ್ಟುಕೊಳ್ಳಬಹುದು
ಪ್ರಸ್ತುತ ದಿನಗಳಲ್ಲಿ ಅಪಾರವಾದ ಹಣವಿಲ್ಲದವರು ಚುನಾವಣೆಗೆ
ಸ್ಪರ್ಧಿಸುವುದೇ ಅಸಾಧ್ಯವಾಗಿದೆ. ಇದಕ್ಕೆ ಕಾರಣ ಮತದಾರರು ಮತ್ತು ಮುಖಂಡರು ಹಣಕ್ಕಾಗಿ ಆಸೆ ಪಡುತ್ತಿರುವುದು.
ನಮ್ಮ ಹಿಂದಿನಕಾಲದಲ್ಲಿ ನಾಯಕತ್ವಕ್ಕೆ ಬೆಲೆಕೊಡುತ್ತಿದ್ದರು ಇಂದು ನಾಯಕರಲ್ಲಿರುವ ಐಶ್ವರ್ಯಕ್ಕೆ
ಬೆಲೆ ಕೊಡುತ್ತಿರುವುದು ವಿಪರ್ಯಾಸವಾಗಿದೆ. ಆದ್ದರಿಂದ ಈ ಲೇಖನದ ಮೂಲಕ ವಿನಂತಿಸಿಕೊಳ್ಳುವುದೆನೆಂದರೆ,
ಮತದಾರರೇ ಮತ ಚಲಾಯಿಸುವುದು ನಿಮ್ಮ ಹಕ್ಕು ಆದ್ದರಿಂದ ನೀವು ತಪ್ಪದೇ ಮತ ಚಲಾಯಿಸಿ. ಎಷ್ಟೇ ದೂರದಲ್ಲಿದ್ದರೂ
ನಿಮ್ಮ ಹಣ ಖರ್ಚಾದರೂ ಚಿಂತಿಸದೆ ಮತಚಲಾಯಿಸಿ. ಉತ್ತಮ ರಾಜಕೀಯ ವ್ಯಕ್ತಿಗಳನ್ನು ಆಯ್ಕೆಮಾಡುವ ಮೂಲಕ
ಭವಿಷ್ಯದ ಬದಲಾವಣೆಗೆ ನಾವೆಲ್ಲರೂ ನಾಂದಿಯಾಡೊಣ.
ಪದ್ಮಾವತಿ ಎನ್
ಸಂಶೋಧನ ವಿದ್ಯಾರ್ಥಿ
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ
ಮಾನಸ ಗಂಗೋತ್ರಿ ಮೈಸೂರು.